[go: up one dir, main page]

ವಿಷಯಕ್ಕೆ ಹೋಗು

ದಂಶಕ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ದಂಶಕ
Temporal range: Late Paleocene – recent
ಕ್ಯಾಪಿಬಾರಾ
ಸ್ಪ್ರಿಂಗ್‍ಹೇರ್
ಚಿನ್ನದ ಹೊದಿಕೆಯ ನೆಲ ಅಳಿಲು
ಉತ್ತರ ಅಮೇರಿಕದ ಬೀವರ್
ಮನೆ ಇಲಿ
Scientific classification e
ಕ್ಷೇತ್ರ: ಯೂಕ್ಯಾರ್ಯೋಟಾ
ಸಾಮ್ರಾಜ್ಯ: ಅನಿಮೇಲಿಯ
ವಿಭಾಗ: ಕಾರ್ಡೇಟಾ
ವರ್ಗ: ಮ್ಯಾಮೇಲಿಯಾ
Mirorder: ಸಿಂಪ್ಲಿಸಿಡೆಂಟಾಟಾ
ಗಣ: ರೋಡೆಂಷಿಯ
Bowdich, 1821
ಉಪಗಣಗಳು
  • ಅನೊಮಾಲುರೊಮೊರ್ಫ಼ಾ
  • ಕ್ಯಾಸ್ಟರಿಮೊರ್ಫ಼ಾ
  • ಹಿಸ್ಟ್ರಿಕೊಮೊರ್ಫ಼ಾ (ಕ್ಯಾವಿಯೊಮೊರ್ಫ಼ಾ ಸೇರಿದಂತೆ)
  • ಮಯೊಮೊರ್ಫ಼ಾ
  • ಸ್ಕಿಯುರೊಮೊರ್ಫ಼ಾ
ಎಲ್ಲ ದಂಶಕ ಪ್ರಭೇದಗಳ ಸಂಯೋಜಿತ ವ್ಯಾಪ್ತಿ (ಪರಿಚಯಿಸಲಾದ ಪ್ರಾಣಿಗಳನ್ನು ಒಳಗೊಂಡಿಲ್ಲ)

ದಂಶಕಗಳು ರೋಡೆಂಷಿಯ ಗಣದ ಸಸ್ತನಿ ಪ್ರಾಣಿಗಳು.[][][] ರೋಡೆಂಷಿಯ ಸ್ತನಿಗಳ ವರ್ಗಕ್ಕೆ ಸೇರಿದ ಒಂದು ಗಣ. ಸ್ತನಿಗಳಲ್ಲಿ ಕಂಡುಬರುವ ಎಲ್ಲ ಸಾಮಾನ್ಯ ಗುಣಗಳೊಡನೆ ಕೆಲವು ಮಾರ್ಪಾಡುಗಳೂ ಈ ಪ್ರಾಣಿಗಳಲ್ಲಿ ಕಂಡುಬರುತ್ತವೆ. ಈ ಗಣಕ್ಕೆ ಸೇರುವ ಪ್ರಾಣಿಗಳೆಲ್ಲವೂ ಸಸ್ಯಾಹಾರಿಗಳು. ಇವನ್ನು ದಂಶಕಗಳು ಎಂದೂ ಕರೆಯುವುದಿದೆ. ಸಾಮಾನ್ಯವಾಗಿ ಅಳಿಲು, ಇಲಿ, ಹೆಗ್ಗಣಗಳು ಈ ಗುಂಪಿಗೆ ಸೇರುತ್ತವೆ. ರೋಡೆಂಷಿಯ ಗುಂಪಿನ ಪ್ರಾಣಿಗಳ ಗ್ರಹಣಸಾಮರ್ಥ್ಯವೂ ಸೂಕ್ಷ್ಮವಾಗಿರುತ್ತದೆ. ಅಳಿಲುಗಳ ಬಾಲದ ತುಂಬೆಲ್ಲ ಕೂದಲು ಇವೆ.

ಮುಖ್ಯ ಲಕ್ಷಣಗಳು

[ಬದಲಾಯಿಸಿ]

ಈ ಪ್ರಾಣಿಗಳ ಮುಖ್ಯ ಲಕ್ಷಣಗಳೆಂದರೆ ಹಲ್ಲುಗಳ ರಚನೆ.[] ಎರಡು ಜೊತೆ ಬಾಚಿಹಲ್ಲುಗಳ ಪೈಕಿ ಮುಂಭಾಗದ ಜೋಡಿಗಳು ಚಿಕ್ಕವಾಗಿರುತ್ತವೆ ಇಲ್ಲವೆ ಪೂರ್ತಿ ಮಾಯವಾಗಿರುತ್ತವೆ. ಎರಡನೆಯ ಜೊತೆ ಬಾಚಿಹಲ್ಲುಗಳು ದೊಡ್ಡವೂ ಬಲಯುತವೂ ಆಗಿವೆ. ಇವು ಬಿಲ್ಲಿನಂತೆ ಬಾಗಿದ್ದು ಮರಗೆಲಸದಲ್ಲಿ ಬಳಸುವ ಉಳಿಯಂತಿರುತ್ತದೆ.[] ಕಾಯಿಗಳನ್ನು ಹಾಗೂ ಗೆಡ್ಡೆಗೆಣಸುಗಳನ್ನು ಕೆರೆದು ತಿನ್ನಲು ಇಂಥ ಹಲ್ಲುಗಳು ಸಹಾಯಕವಾಗಿವೆ. ಪದೇ ಪದೇ ಗಟ್ಟಿ ಪದಾರ್ಥಗಳನ್ನು ಕೆರೆಯುವುದರಿಂದ ಬಾಚಿಹಲ್ಲಿನ ಹೊರಭಾಗ ನಿಧಾನವಾಗಿ ಸವೆಯುತ್ತಿರುತ್ತದೆ. ಆದರೆ ಸವೆದ ಭಾಗ ಅದೇ ವೇಗದಲ್ಲಿ ಬೆಳೆಯಬಲ್ಲುದು. ಹಲ್ಲಿನ ಒಳಭಾಗದಲ್ಲಿ ಅಗಲವಾಗಿ ತೆರೆದಿರುವ ತಿರುಳಿನ ಕುಹರ (ಕುಳಿ) ಇರುತ್ತದೆ. ಹಲ್ಲು ಆಳಕ್ಕೆ ಇಳಿದಂತೆ ತಿರುಳು ಅಗಲವಾಗುವುದರಿಂದ ಇವನ್ನು ಬೇರುರಹಿತ ಹಲ್ಲುಗಳು ಎಂದು ಕರೆಯುವುದಿದೆ. ಇನ್ನುಳಿದ ಬಾಚಿಹಲ್ಲು ಹಾಗೂ ಹಿಂದವಡೆ ಹಲ್ಲುಗಳ ನಡುವೆ ವಸಡು ಖಾಲಿಯಾಗಿರುತ್ತದೆ. ಆದರೆ ಆಹಾರ ಸೇವಿಸಿದಾಗ ವಸಡಿನ ಈ ಭಾಗದ ಮಾಂಸಪದರ ಹೊರಚಾಚುವುದರಿಂದ ಎರಡೂ ದಂತಪಂಕ್ತಿಗಳ ನಡುವೆ ಒಂದು ಚೀಲವೇರ್ಪಡುತ್ತದೆ. ಈ ಚೀಲದಲ್ಲಿ ಆಹಾರ ಸಂಗ್ರಹವಾಗಿದ್ದು ಸುರಕ್ಷಿತ ಸ್ಥಳಕ್ಕೆ ಹೋಗಿ ಅಲ್ಲಿ ಆಹಾರವನ್ನು ಅಗಿದು ನುಂಗಲು ಅನುಕೂಲಕರವಾಗಿದೆ.

ದವಡೆಯ ಹಲ್ಲುಗಳು ಆಹಾರವನ್ನು ಅಗಿಯುವುದಕ್ಕೆ ಸಹಾಯಕಾರಿ. ಪ್ರತಿಯೊಂದು ದವಡೆಯ ಹಲ್ಲಿನ ಮೇಲ್ಭಾಗದಲ್ಲಿ ಮುಂದೆ ಎರಡು ಹಾಗೂ ಹಿಂದೆ ಎರಡು ದಿಬ್ಬಗಳಿದ್ದು ನಡುವೆ ಕುಳಿಯಿರುತ್ತದೆ. ಮೇಲ್ದವಡೆಯ ಹಲ್ಲು ಇದರಲ್ಲಿ ಭದ್ರವಾಗಿ ಕೂತುಕೊಳ್ಳುತ್ತದೆ. ಇದರಿಂದ ಸೇವಿಸಿದ ಆಹಾರವನ್ನು ಸುಲಭವಾಗಿ ಅಗಿದು ನುಂಗಲು ಅನುಕೂಲ. ಇದರಿಂದ ಹಾಲುಹಲ್ಲುಗಳು ಬಹುಬೇಗ ಬಿದ್ದು ಕಾಯಂ ಹಲ್ಲುಗಳು ಬರುತ್ತವೆ. ಈ ಹಲ್ಲುಗಳ ಮಾರ್ಪಾಡಿಗೆ ತಕ್ಕಂತೆ ಕೆಳದವಡೆ ಹಾಗೂ ಅದರ ಸ್ನಾಯುಗಳೂ ಮಾರ್ಪಾಡಾಗಿರುತ್ತದೆ. ಇದರಿಂದಾಗಿ ಬಾಚಿಹಲ್ಲುಗಳು ಸ್ವಲ್ಪ ಮುಂಭಾಗಕ್ಕೆ ಇಲ್ಲವೆ ಹಿಂಭಾಗಕ್ಕೆ ಅಥವಾ ಆಚೀಚೆ ಬಾಗಬಲ್ಲವು.

ದಂತ ಹಾಗೂ ದವಡೆಯನ್ನು ಹೊರತುಪಡಿಸಿದರೆ ಈ ಗುಂಪಿನ ಪ್ರಾಣಿಗಳು ಇನ್ನುಳಿದ ಸ್ತನಿಗಳಂತೆಯೇ ಇವೆ. ಮುಂಗಾಲುಗಳು ಹಿಂಗಾಲುಗಳಿಗಿಂತ ಚಿಕ್ಕದಾಗಿದ್ದು ಆಹಾರವನ್ನು ಹಿಡಿಯಲು ಸಹಕಾರಿಯಾಗಿವೆ. ಮೃದುಮಣ್ಣಿನ ಭೂಮಿಯನ್ನು ಮುಂಗಾಲಿನಿಂದ ಕೆರೆದು ಬಿಲಗಳನ್ನೂ ರಚಿಸಬಲ್ಲವು. ಹಿಂಗಾಲು ಬಲಯುತವಾಗಿದ್ದು ದ್ವಿಪಾದ ಪ್ರವೃತ್ತಿ ಹಾಗೂ ಜಿಗಿದಾಡುವ ಪ್ರವೃತ್ತಿಗಳನ್ನೂ ಕಾಣಬಹುದು. ಚೂಪು ಮೂತಿ, ಪುಟ್ಟ ಹೊರಕಿವಿ - ಇವು ತಲೆಯ ಭಾಗದ ಮುಖ ಲಕ್ಷಣಗಳು. ಸಣ್ಣ ಮತ್ತು ದೊಡ್ಡ ಕರುಳಿನ ನಡುವೆ ಒಂದು ಉದ್ದವಾದ ಅಂಧಾಂತ್ರ ಕೊಳವೆಯಿದ್ದು, ಅವು ಸೇವಿಸಿದ ಆಹಾರವನ್ನು ಜೀರ್ಣಿಸಿಕೊಳ್ಳಲು ಅನುಕೂಲವಾಗಿದೆ.

ಸಂತಾನೋತ್ಪತ್ತಿ

[ಬದಲಾಯಿಸಿ]

ಇವುಗಳಲ್ಲಿ ಬಹುಋತುಚಕ್ರವಿದ್ದು ಈ ಪ್ರಾಣಿಗಳು ವರ್ಷವೆಲ್ಲ ಮರಿ ಹಾಕಬಲ್ಲವು. ಒಂದು ಸೂಲಿನಲ್ಲಿ 2 ರಿಂದ 20 ಮರಿಗಳು ಜನಿಸುತ್ತವೆ. ತಾಯಿ ಈ ಮರಿಗಳಿಗೆ ಹಾಲುಣಿಸಿ ಹಲವು ವಾರಗಳ ತನಕ ಪೋಷಿಸುತ್ತದೆ.

ಉಲ್ಲೇಖಗಳು

[ಬದಲಾಯಿಸಿ]
  1. Musser, Guy. "rodent". Encyclopedia Britannica, 26 Aug. 2023, https://www.britannica.com/animal/rodent. Accessed 29 October 2023.
  2. "Rodent." New World Encyclopedia, . 4 Apr 2008, 00:37 UTC. 29 Oct 2023, 12:20 <https://www.newworldencyclopedia.org/p/index.php?title=Rodent&oldid=687541>.
  3. Sprott, Richard L. "Rodents ." Encyclopedia of Aging. . Encyclopedia.com. 18 Oct. 2023 <https://www.encyclopedia.com>.
  4. Single, G.; Dickman, C. R.; MacDonald, D. W. (2001). "Rodents". In MacDonald, D. W. (ed.). The Encyclopedia of Mammals (2nd ed.). Oxford University Press. pp. 578–587. ISBN 978-0-7607-1969-5.
  5. Nowak, R. M. (1999). Walker's Mammals of the World. Johns Hopkins University Press. p. 1244. ISBN 978-0-8018-5789-8.

ಹೊರಗಿನ ಕೊಂಡಿಗಳು

[ಬದಲಾಯಿಸಿ]

ಪ್ರಾಣಿಶಾಸ್ತ್ರ, ಅಸ್ಥಿಶಾಸ್ತ್ರ, ತುಲನಾತ್ಮಕ ಅಂಗರಚನಾಶಾಸ್ತ್ರ

[ಬದಲಾಯಿಸಿ]

ವಿವಿಧ

[ಬದಲಾಯಿಸಿ]
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ದಂಶಕ&oldid=1192806" ಇಂದ ಪಡೆಯಲ್ಪಟ್ಟಿದೆ