ಅವಲಕ್ಕಿ
ಅವಲಕ್ಕಿಯು ಚಪ್ಪಟೆಯಾದ, ಹಗುರ ಮತ್ತು ಒಣ ಚೂರುಗಳಾಗಿ ಮಟ್ಟವಾಗಿಸಲಾದ ತಳಿಸಿದ ಅಕ್ಕಿ. ಅಕ್ಕಿಯ ಈ ಚೂರುಗಳು, ಬಿಸಿ ಅಥವಾ ತಣ್ಣನೆಯ, ದ್ರವಕ್ಕೆ ಸೇರಿಸಿದೊಡನೆ, ನೀರು, ಹಾಲು ಅಥವಾ ಇತರ ದ್ರವಗಳನ್ನು ಹೀರಿಕೊಳ್ಳುವುದರಿಂದ ಉಬ್ಬುತ್ತವೆ. ಬಹುತೇಕ ತೆಳು ಅವಲಕ್ಕಿಯಿಂದ ಸಾಮಾನ್ಯ ಅಕ್ಕಿಕಾಳಿನ ನಾಲ್ಕು ಪಟ್ಟು ದಪ್ಪವಿರುವ ಅವಲಕ್ಕಿಯವರೆಗೆ ಈ ಚೂರುಗಳ ದಪ್ಪ ಬದಲಾಗುತ್ತದೆ. ಅವಲಕ್ಕಿಯನ್ನು ಹಲವು ತಿಂಗಳುಗಳ ಕಾಲ ಕೆಡದಂತೆ ಇಡಬಹುದು. ಭಾರತದ ಹಲವು ರಾಜ್ಯಗಳಲ್ಲಿ ಅವಲಕ್ಕಿಯನ್ನು ವಿವಿಧ ರೀತಿಯ ತಿನಿಸುಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ. ತುಸುಬೇಯಿಸಿದ ಅಕ್ಕಿ (ಕುಸುಬಲಕ್ಕಿ)ಯಷ್ಟೇ ವಿಟಮಿನ್ ಅಂಶಗಳು ಇದರಲ್ಲಿರುತ್ತದೆ ಮತ್ತು ಪಾಲಿಶ್ ಮಾಡದೇ ಇರುವುದರಿಂದ ಪೋಷಕಾಂಶಗಳೂ ಇರುತ್ತವೆ. ಬಿ ಕಾಂಪ್ಲೆಕ್ಸ್ ವಿಟಮಿನ್ ನಿಯಾಸಿನ್ ಮತ್ತು ಕಬ್ಬಿಣದ ಅಂಶ ಹೇರಳವಾಗಿರುತ್ತದೆ. ಅವಲಕ್ಕಿಯನ್ನು ಮುಖ್ಯವಾಗಿ ಒಂದು ಲಘುತಿಂಡಿಯನ್ನಾಗಿ ಬಳಸಲಾಗುತ್ತದೆ. ಅವಲಕ್ಕಿಯು ಏಷಿಯಾದಲ್ಲಿ ಜನಪ್ರಿಯ ತಿನಿಸಾಗಿದೆ. ಇದಕ್ಕೆ ಹಲವು ರೀತಿಯ ಒಗ್ಗರಣೆ, ಮಸಾಲೆ, ಸಿಹಿ ಮುಂತಾದವುಗಳನ್ನು ಸೇರಿಸಿ ಹಲವು ಬಗೆಯ ತಿನಿಸುಗಳನ್ನು ತಯಾರಿಸಲಾಗುತ್ತದೆ.[೧] ಇದನ್ನು ಮೆದುವಾಗಿ, ಒಣದಾಗಿ ಅಥವಾ ಎಣ್ಣೆಯಲ್ಲಿ ಕರಿದು ಬಳಸಬಹುದು. ನೀರಿನಲ್ಲಿ ನೆನೆಸಿ ತೆಗೆದು ಅದಕ್ಕೆ ಹಾಲು ಅಥವಾ ಮೊಸರನ್ನು ಸೇರಿಸಿ ತಿನ್ನಬಹುದು. ಒಣ ಅವಲಕ್ಕಿಯ ಜೊತೆ ಬೆಲ್ಲ ಹಾಗೂ ಕೊಬ್ಬರಿಯನ್ನು ಸೇರಿಸಿ ತಿನ್ನಬಹುದು. ತಿನ್ನುವ ವಿಧಾನದಿಂದ ಹಿಡಿದು ಅವಲಕ್ಕಿ ಬಾತ್, ಒಗ್ಗರಣೆ ಅವಲಕ್ಕಿ,[೨] ಅವಲಕ್ಕಿ ಉಪ್ಪಿಟ್ಟು,[೩][೪] ಅವಲಕ್ಕಿ ಶಿರಾ, ಅವಲಕ್ಕಿ ಪೊಂಗಲ್[೫] ಮುಂತಾದ ತಿನಿಸುಗಳನ್ನು ಅವಲಕ್ಕಿಯಿಂದ ತಯಾರು ಮಾಡಬಹುದು. ಪಾಶ್ಚಾತ್ಯ ದೇಶಗಳಲ್ಲಿ ಇದನ್ನು ತಿಂಡಿಯಾಗಿ ಮಾರಾಟಮಾಡಲು ವಾಣಿಜ್ಯೋದ್ದೇಶದಿಂದ ತಯಾರಿಸಲಾಗುತ್ತದೆ.
ಇತರ ಹೆಸರುಗಳು
[ಬದಲಾಯಿಸಿ]ಬೇರೆ ಬೇರೆ ನುಡಿಗಳಲ್ಲಿ ಅವಲಕ್ಕಿಯ ಹೆಸರುಗಳು ಹೀಗಿವೆ: ಅಟುಕುಲು (ತೆಲುಗು), ಅವಲ್ (ತಮಿಳು) ಮತ್ತು (ಮಲಯಾಳಂ), ಚಿಂಡಿ (ಬೆಂಗಾಳಿ) ಮತ್ತು ಬಿಹಾರ, ಝಾರ್ಖಂಡ್ ಭಾಗಗಳು, ಚಿರಾ (ಅಸ್ಸಾಮಿ), ಚೂಡಾ (ಒಡಿಯಾ), ಚಿವುರಾ (चिउरा) (ನೇಪಾಳಿ, ಭೋಜಪುರಿ, ಛತ್ತೀಸ್ ಘರಿ), ಪೋಹಾ (ಹಿಂದಿ), ಬಜಿ (ನೇವಾರಿ), ಪೋಹೆ (ಮರಾಠಿ), ಪೋವು (ಕೊಂಕಣಿ),ಬಜಿಲ್(ತುಳು) ಮತ್ತು ಪವ್ವಾ (પૌંઆ) (ಗುಜರಾತಿ).[೬]
ಅವಲಕ್ಕಿಯಿಂದ ತಯಾರಿಸಲಾಗುವ ಭಕ್ಷ್ಯಗಳು
[ಬದಲಾಯಿಸಿ]ಅವಿಲ್ ನಾನಚಾತು(ಕೇರಳ) : ಅವಲಕ್ಕಿಯನ್ನು ಹಾಲು, ಸಕ್ಕರೆ, ತೆಂಗಿನತುರಿ ಮತ್ತು ಬಾಳೆಹಣ್ಣಿನ ತುಂಡುಗಳೊಂದಿಗೆ ಬೆರೆಸಿ ಮಾಡಲಾಗುತ್ತದೆ. ಕಡಲೆಕಾಯಿ ಅಥವಾ ಗೋಡಂಬಿಯನ್ನೂ ಸಹ ಬಳಸಬಹುದು ;[೭] ಅವಿಲ್ ವಿಲೈಚಾತು (ಕೇರಳ) : ತುಪ್ಪದಲ್ಲಿ ಅವಲಕ್ಕಿಯನ್ನು ಹುರಿದು ಮತ್ತು ಬೆಲ್ಲ , ದಾಲ್ , ಗೋಡಂಬಿ , ಕಡಲೆಕಾಯಿ ಮತ್ತು ತೆಂಗಿನತುರಿ ಬಳಸಿ ಈ ಖಾದ್ಯವನ್ನು ಮಾಡಲಾಗುತ್ತದೆ ; ದಾಹಿ ಚಿಯುರಾ (ನೇಪಾಳಿ): ಮಾಗಿದ ಬಾಳೆಹಣ್ಣು, ಮೊಸರು ಮತ್ತು ಸಕ್ಕರೆಯೊಂದಿಗೆ ಅವಲಕ್ಕಿಯನ್ನು ಬೆರೆಸಿ ಈ ಖಾದ್ಯವನ್ನು ತಯಾರಿಸಲಾಗುತ್ತದೆ . ಇದನ್ನು ಯಾವಾಗ ಬೇಕಾದರೂ ಲಘು ಆಹಾರವಾಗಿ ಸೇವಿಸಬಹುದು . ಇದನ್ನು ಸಾಂಪ್ರದಾಯಿಕವಾಗಿ ನೇಪಾಳದಲ್ಲಿ ಭತ್ತದ ನಾಟಿ ಮಾಡುವ ಸಮಯದಲ್ಲಿ ರೈತರು ತಿನ್ನುತ್ತಾರೆ ; ಕಾಂದ ಪೋಹ : ಬೇಯಿಸಿದ ಆಲೂಗಡ್ಡೆ, ಈರುಳ್ಳಿ, ಸಾಸಿವೆ, ಅರಿಶಿನ ಮತ್ತು ಕೆಂಪು ಮೆಣಸಿನಕಾಯಿಯ ಸಣ್ಣ ತುಂಡುಗಳನ್ನು ಹಾಕಿ ಅವಲಕ್ಕಿಯೊಂದಿಗೆ ಬೆರೆಸಿ ಬಿಸಿಬಿಸಿಯಾಗಿ ಬಡಿಸಲಾಗುತ್ತದೆ.[೮]
ಸಾಂಪ್ರದಾಯಿಕ ತಯಾರಿಕೆಯ ವಿಧಾನ
[ಬದಲಾಯಿಸಿ]ಮೊದಲಿಗೆ ಕಾಳುಗಳನ್ನು ಮೆದುಗೊಳಿಸಲು ಭತ್ತವನ್ನು ೨-೩ ದಿನಗಳ ಕಾಲ ನೀರಿನಲ್ಲಿ ನೆನೆಸಲಾಗುತ್ತದೆ. ಅನಂತರ ಕೆಲವು ನಿಮಿಷಗಳ ಕಾಲ ನೀರಿನಲ್ಲಿ ಕುದಿಸಲಾಗುತ್ತದೆ. ಇದಾದಮೇಲೆ ನೀರನ್ನು ಬಸಿದು ಭತ್ತವನ್ನು ಮಣ್ಣಿನ ಪಾತ್ರೆಗಳಲ್ಲಿ ಬಿಸಿಮಾಡಲಾಗುತ್ತದೆ. ಇದರಿಂದ ಸಿಪ್ಪೆ ಬಿರಿಯುತ್ತದೆ. ಇದನ್ನು ಮರದ ಒನಕೆಯಿಂದ ಬಡಿಯಲಾಗುತ್ತದೆ. ಇದರಿಂದ ಭತ್ತವು ಚಪ್ಪಟೆಯಾಗುವುದರ ಜೊತೆಗೆ ಸಿಪ್ಪೆಯೂ ಬೇರ್ಪಡುತ್ತದೆ. ಈ ಬಡಿಯುವ ವಿಧಾನದಲ್ಲಿ ಬಳಸಲಾಗುವ ವಿವಿಧ ಒತ್ತಡದ ಮೇಲೆ ಅವಲಕ್ಕಿಯ ದಪ್ಪ ಬದಲಾಗುತ್ತದೆ. ಹೀಗೆ ತಯಾರಾಗುವ ಅವಲಕ್ಕಿಯು ತೆಳುವಾಗಿ ಬಿಳಿಬಣ್ಣದ್ದಾಗಿರುತ್ತದೆ.
ಉಲ್ಲೇಖಗಳು
[ಬದಲಾಯಿಸಿ]- ↑ "ಬ್ರೇಕ್‌ಫಾಸ್ಟ್‌ಗೆ ಅವಲಕ್ಕಿ ಬೆಸ್ಟ್". Vijaya Karnataka. 5 August 2017. Retrieved 5 January 2020.
- ↑ "ಅವಲಕ್ಕಿ ಸ್ಪೆಷಲ್". Vijaya Karnataka. 28 September 2014. Retrieved 5 January 2020.
- ↑ "ಅವಲಕ್ಕಿ ಪ್ರಿಯನಿಗೆ ವೈವಿಧ್ಯಮಯ ಅಡುಗೆ". Vijaya Karnataka. 25 August 2016. Retrieved 5 January 2020.
- ↑ "ನೇಮಕ ಪಾರದರ್ಶಕವಾಗಿ ನಡೆಯಲಿ". Vijaya Karnataka. 23 June 2017. Retrieved 5 January 2020.
- ↑ "ಅವಲಕ್ಕಿ ಸಿಹಿ ಪೊಂಗಲ್". Udayavani - ಉದಯವಾಣಿ. Retrieved 5 January 2020.
- ↑ "Flattened rice in Hindi: WhatIsCalled.com". Whatiscalled (in ಇಂಗ್ಲಿಷ್). Retrieved 5 January 2020.
- ↑ "Aval Puttu /Rice Flakes Puttu | Sweet Poha (in Tamil with English Subtitles)" (in ಇಂಗ್ಲಿಷ್). Retrieved 5 January 2020.
- ↑ Kapoor, Sanjeev. "How to make Kanda Poha, recipe by MasterChef Sanjeev Kapoor". sanjeev kapoor. Retrieved 5 January 2020.